ಹಕ್ಕಿಪುಕ್ಕ

ನಮ್ಮ ಸುತ್ತಮುತ್ತಲ್ಲಿನ ಪರಿಸರದಲ್ಲಿ ಕಾಣುವ ನಾಲ್ಕಾರು ಹಕ್ಕಿಗಳ ಬಗ್ಗೆ ಮೆಚ್ಚಿ ಹತ್ತಾರು ಸಾಲು ಬರೆಯಬಹುದು. ಆದರೆ, ಹಕ್ಕಿಗಳ ಪ್ರಪಂಚ ವಿಶಾಲವಾದುದು.  ಜೀವರಾಶಿಯಲ್ಲಿ ಮಾನವನಿಗೆ ಆದ್ಯತೆಯಿದ್ದರೂ ಸ್ವಾತಂತ್ರ್ಯದ ವಿಷಯಕ್ಕೆ ಬಂದರೆ ಇಂದಿಗೂ ಹಕ್ಕಿಗಳ ಉದಾಹರಣೆ ನೀಡುತ್ತೇವೆ.  ಹಕ್ಕಿಗಳ ಪ್ರಪಂಚದಲ್ಲಿ ಸ್ವತಂತ್ರತೆ ಇದ್ದರೂ ಶಿಸ್ತಿದೆ, ಜಾಣ್ಮೆಯ ಬದುಕಿದೆ, ಒಲುಮೆಯ ರಾಗವಿದೆ, ಜವಾಬ್ದಾರಿಯಿದೆ, ಲೆಕ್ಕಾಚಾರವಿದೆ ಒಟ್ಟಾರೆ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವ ಕ್ರಿಯೆಯಿದೆ. ಹೀಗಾಗಿ ಪಕ್ಷಿಗಳ ಜಗತ್ತೇ ಒಂದು ವಿಸ್ಮಯ.

ಪುಟ್ಟ ಗುಬ್ಬಚ್ಚಿಯಿಂದ ರಣಹದ್ದುಗಳ ತನಕ, ಮಡಿವಾಳ ಹಕ್ಕಿಯಿಂದ ಕೋಗಿಲೆ ತನಕ, ಗರಿ ಬಿಚ್ಚಿ ನಲಿವ ನವಿಲಿನಿಂದ ನೀಲಕಂಠ ತನಕ ಭಾರತದಲ್ಲಿ ನಾನಾ ವಿಧದ ಪಕ್ಷಿಗಳು ಪರಿಸರ ಮಾಲಿನ್ಯ ಹಾಗೂ ಮಾನವ ಸೇರಿದಂತೆ ಇತರೆ ಜೀವಿಗಳ ಉಪಟಳದ ನಡುವೆ ತಮ್ಮ ಸಂತತಿಯನ್ನು ಉಳಿಸಿಕೊಂಡು ಬಂದಿವೆ.

ಆದರೆ ಈ  ಸ್ವತಂತ್ರ ಜೀವಿಗಳ ಪಾಡಿಗೆ ಇರಲು ಬಿಡದೆ ನಮ್ಮ ಸ್ವಾರ್ಥಕ್ಕೆ ಬಲಿ ಕೊಡುತ್ತಾ ಬಂದಿದ್ದೇವೆ. ಇಂಥ ಸ್ಥಿತಿಯಲ್ಲಿ ಪಕ್ಷಿ ವೀಕ್ಷಣೆ ಜೊತೆಗೆ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದೆ. ಮುಂದಿನ ಶತಮಾನದ ಹೊತ್ತಿಗೆ ಸುಮಾರು 1200 ಕ್ಕೂ ಅಧಿಕ ಜೇವವೈವಿಧ್ಯಗಳು ವಿನಾಶವಾಗಲಿದೆಯಂತೆ ಇದಕ್ಕೆ ಪರಿಸರ ಮಾಲಿನ್ಯ ರಾಸಾಯನಿಕಗಳ ಬಳಕೆ, ಹವಾಮಾನ ವೈಪರೀತ್ಯ, ಜೀವವೈವಿಧ್ಯಗಳ ಬಗ್ಗೆ ಮನುಷ್ಯರ ನಿರ್ಲಕ್ಷ್ಯ ಹೀಗೆ ಅನೇಕ ಕಾರಣಗಳಿರಬಹುದು. ಅದರೆ, ಹಕ್ಕಿಗಳ ಅಳಿವು ಉಳಿವು ನಮ್ಮ ಕೈಯಲ್ಲಿದೆ. ಹಕ್ಕಿಗಳ ಉಳಿವಿನಿಂದ ಪರಿಸರ ಹಾಗೂ ನಮ್ಮ ಉಳಿವು ಸಾಧ್ಯ.

ಪಕ್ಷಿ ವೀಕ್ಷಣೆ, ಪಕ್ಷಿಗಳ ಛಾಯಾಗ್ರಹಣ : ಇದೊಂದು ಹಿತಕರ ಹವ್ಯಾಸ. ಇದರಿಂದ ಹಕ್ಕಿಗಳ ಬಗ್ಗೆ ಅಪ್ಯಾಯತೆ ಬೆಳೆಯುತ್ತದೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಸಂರಕ್ಷಣೆಯ ಹೊಣೆಗಾರಿಕೆಯೂ ಇರುತ್ತದೆ. ಈ ನಿಟ್ಟಿನಲ್ಲಿ ಈ ಜಾಲ ತಾಣ ವನ್ನು ರೂಪಿಸಲಾಗಿದೆ.  ಇಲ್ಲಿ ಪಕ್ಷಿಗಳ ಅಸಲಿ ಹೆಸರು, ಸ್ಥಳೀಯ ಹೆಸರುಗಳನ್ನು ನೀಡಲಾಗಿದೆ. ಕನ್ನಡದಲ್ಲಿ ಹಕ್ಕಿಗಳ ಹೆಸರುಗಳಿಗೆ ಒಂದು ಸರಿಯಾದ ಮಾನದಂಡವಿಲ್ಲ. ಬೇರೆ ಬೇರೆ ಪ್ರಾಂತ್ಯದಲ್ಲಿ ಬೇರೆ ಬೇರೆ ಹೆಸರುಗಳು ಚಾಲ್ತಿಯಲ್ಲಿವೆ. ಇದೆಲ್ಲದರ ಸಂಗ್ರಹ ಇಲ್ಲಿ ನೀಡುವ ಪ್ರಯತ್ನ ಹಾಗೂ ಸರಿಯಾದ ಏಕರೂಪ ಶಿಷ್ಟಾಚಾರ ಬಳಕೆ ಸಾಧ್ಯತೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ.

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಆಶಯದಂತೆ ಹೆಚ್ಚಾಗಿ ಕನ್ನಡದಲ್ಲೇ ಹಕ್ಕಿಗಳ ಬಗ್ಗೆ ವಿವರಣೆ, ಪಕ್ಷಿ ಪ್ರಪಂಚದ ಸ್ಥೂಲ ಪರಿಚಯ, ಪಕ್ಷಿ ಶೂಟರ್ಸ್(ಫೋಟೋಗ್ರಾಫರ್ಸ್) ಗಿಂತ ಪಕ್ಷಿ ವೀಕ್ಷಕರನ್ನು ಹೆಚ್ಚಿಸುವುದು ಎಲ್ಲಾ ಸ್ತರದ ಜನಕ್ಕೆ ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಆದಷ್ಟು ಮಾಹಿತಿ ಒಂದೇ ಕಡೆ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ.
ಹಕ್ಕಿಪುಕ್ಕ ತಂಡ